ಮುಂಜಾನೆಯಲಿ, ಮಂಜಿನ ತೆರೆಯೊಳು
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಹಸಿರಿನ ಮಡಿಲಲಿ ಕಣ್ಗಳು ಮಲಗುತಲಿವೆ
ಪವಳಿದ ಕಣ್ಣಸುಳೆಗೆ ಮೌನದ ಜೋಗುಳವಿದೆ
ಗಗನಕೆ ಕೈಚಾಚುತ ಗಿರಿಶೃಂಗವು ಮೈತುಂಬಿದೆ
ಜಲಧಾರೆಯ ಕಣ್ತುಂಬಲು ಮನದೊಳಗೆ ಕಾತರವಿದೆ
ಈ ಕಾತರ ನನಗೆ ಆತುರ ತಂದಿದೆ
ಅದ ನೋಡಲು ಮನವು ಪರಿತಪಿಸಿದೆ.
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಸುರಿಯುವ ಮಳೆಯಲಿ ಚಳಿಯು ಮೈಗೂಡಿದೆ
ತಂಗಾಳಿಯು ಮಾತಾಡದೆ ಮೌನದಿ ತೇಲುತಲಿದೆ
ಹಕ್ಕಿಯ ಕಲರವ ಋತುಗಳ ಕರೆದಂತಿದೆ
ತೊರೆಗಳು ಮಲೆನಾಡಿನ ತವರಿನ ಸಿರಿಯಂತಿವೆ
ಆ ಸ್ವರ್ಗ, ಭೂಸ್ವರ್ಗಕೆ ಸಾಮ್ಯವೇ
ಇದ ಸವಿಯಲು ಈ ಜನುಮ ಸಾಲದು ಅಲ್ಲವೇ,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
ಮುಂಜಾನೆಯಲಿ, ಮಂಜಿನ ತೆರೆಯೊಳು
ನುಸುಳ ಬಯಸಿದೆ ಬೆಳಕು,
ಆ ಕವಿದ ಮಬ್ಬಲಿ ಕಣ್ಣಿಗೆ ತೋರದಿದೆ ನಡೆಯು,
ಹೇಗೆ ನಾ ದಾಟಲಿ ಆ ಮಂಜಿನ ತೆರೆಯನು,
ಹೇಗೆ ನಾ ಹುಡುಕಲಿ ಕವಿದ ಮಬ್ಬಲಿ ಬೆಳಕನು,
ತೋರು ಬಾ ಸಹ್ಯಾದ್ರಿಯೇ, ತೋರು ಬಾ ಕೊಡಚಾದ್ರಿಯೇ,
ನಿನ್ನ ತವರಿನ ದಾರಿಯ, ನಿನ್ನ ತವರಿನ ದಾರಿಯ.
*----- ಜಯಸುತ -----*
Subscribe to:
Post Comments (Atom)

No comments:
Post a Comment